ಕರ್ನಾಟಕಕ್ಕೆ ಮೂರ್ನುಡಿ ಪದ್ದತಿ ಯಾಕೆ ಬೇಡ ಗೊತ್ತ ?


ಮೂರ್ನುಡಿ ಪದ್ದತಿ (ತ್ರಿಭಾಷಾ ಸೂತ್ರ) ಅಂದ್ರೆ ಎಲ್ಲಾ ಕಡೆ ಮೂರು ನುಡಿಗಳನ್ನು ಬಳಸಬೇಕು ಎಂದರ್ತ. ಶಾಲೆಗಳ ಕಲಿಕೆಯಲ್ಲಿ, ಕಚೇರಿಗಳಲ್ಲಿ, ಸಾರ್ವಜನಿಕ ಸೇವೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಇತ್ಯಾದಿ. ತಾಯಿನುಡಿಯಾದ್ದರಿಂದ ಕನ್ನಡ, ಕನ್ನಡ ಬಾರದವರಿಗೆ ಮತ್ತು ಉನ್ನತ ಶಿಕ್ಷಣಗಳು ಹೆಚ್ಚುವರಿ ಆಂಗ್ಲ ನುಡಿಯಲ್ಲಿರುವುದರಿಂದ ಆಂಗ್ಲ ಭಾಷೆಯನ್ನು ಸೇರಿಸಲಾಗಿದೆ. ಇವೆರಡರ ಜೊತೆಗೆ ಹಿಂದಿಯನ್ನೂ ಸೇರಿಸಿ, ಮೂರ್ನುಡಿ ಪದ್ದತ್ತಿ ಪಾಲಿಸಬೇಕು ಅಂತ ಕೇಂದ್ರ ಸರ್ಕಾರ ಒತ್ತಾಯಿಸಿದೆ.
ಇದರಿಂದ ಆಗಿವೆ ತೊಂದರೆಗಳು ಏನು ?

೧. ಶಾಲೆಯ ಮಕ್ಕಳಿಗೆ ಅನವಶ್ಯಕ ಹೊರೆ ಮತ್ತು ಹೇರಿಕೆ  
ಉತ್ತರ ಭಾರತದ ರಾಜ್ಯಗಳ ಮಕ್ಕಳು ತಮ್ಮ ಪಟ್ಯದಲ್ಲಿ ಎರಡು ನುಡಿಗಳನ್ನು ಮಾತ್ರ ಕಲಿಯುತ್ತಾರೆ. ಹಿಂದಿ ಮತ್ತು ಆಂಗ್ಲ. ಕರ್ನಾಟಕದ ಮಕ್ಕಳು ಮೂರು ನುಡಿ ಕಲಿಯಲೇಬೇಕು ಅನ್ನೋ ಕಡ್ಡಾಯ ಯಾಕೆ ? ಆಗಲೇ ಇರುವ ದೊಡ್ಡ ಪಟ್ಯದಲ್ಲಿ ಒಂದು ನುಡಿ ಹೆಚ್ಚಾಗಿ ಕಲಿತು ಪರೀಕ್ಷೆ ಬರೆಯುವುದು ತಮಾಷೆಯ ವಿಷಯವಲ್ಲ. ಬೇರೆ ರಾಜ್ಯದ ಮಕ್ಕಳು ತಮ್ಮ ಒಟ್ಟು ಅಂಕಗಳಲ್ಲಿ ಮುಂದೆ ಉಳಿಯುವುದು ಸಹಜ ತಾನೇ ? ಈ ಬೇದ ಭಾವ ಯಾಕೆ. ಎಲ್ಲರೂ ಭಾರತಾಂಬೆಯ ಮಕ್ಕಳೆ.
ಜೊತೆಗೆ, ಕನ್ನಡ ತಾಯಿನುಡಿ ಅಂತ ಕಳೀತೀವಿ. ಉನ್ನತ ಶಿಕ್ಷಣಕ್ಕೆ ಆಂಗ್ಲ ನುಡಿ ಬೇಕೇ ಬೇಕು, ಅದಿಕ್ಕೆ ಕಳೀತೀವಿ. ಹಿಂದಿಯ ಅವಶ್ಯಕತೆ ಏನಿದೆ ಸ್ವಾಮಿ? ನಮ್ಮ ತಾಯಿನುಡಿನೂ ಅಲ್ಲ, ಅದರ ಅವಶ್ಯಕತೆನೂ ಇಲ್ಲ. ಯಾಕೆ ಈ ಹೇರಿಕೆ? ಕಲಿಯುವ ಆಸಕ್ತಿ ಇರುವರು ಕಲಿಯಲಿ. ಕಡ್ಡಾಯ ಯಾಕೆ?
ಎರಡುನುಡಿ ಪದ್ದತಿ (ದ್ವಿಭಾಷಾ ಸೂತ್ರ) ಪಾಲಿಸುತ್ತಿರುವ ರಾಜ್ಯಗಳು - ಅರುಣಾಚಲ ಪ್ರದೇಶ, ಛತ್ತಿಸ್ಗರ್ಹ್, ಹರ್ಯಾಣ, ಹಿಮಾಚಲ ಪ್ರದೇಶ, ಮದ್ಯ ಪ್ರದೇಶ, ರಾಜಸ್ಥಾನ, ದೆಲ್ಲಿ, ಇನ್ನೂ ಅನೇಕ.

೨. ಕನ್ನಡನೂ ಭಾರತದ್ದೇ ಒಂದು ನುಡಿ
ಹಿಂದಿ ಹೇಗೆ ಭಾರತದ ಒಂದು ನುಡಿಯೋ, ಕನ್ನಡನೂ ಭಾರತದ ಒಂದು ನುಡಿನೆ. ಇದರಲ್ಲಿ ಯಾವುದೂ ಹೆಚ್ಚಿಲ್ಲ ಯಾವುದೂ ಕಡಿಮೆಯಿಲ್ಲ. ಎಲ್ಲಾ ನುಡಿಗಳಿಗೂ ತನ್ನ ಪ್ರಾಂತ್ಯದಲ್ಲಿ ಪ್ರಾಮುಖ್ಯತೆ ಇರಲಿ. ಯಾವುದೇ ಪ್ರದೇಶದವರು ತಮ್ಮದಲ್ಲದ ನುಡಿಯನ್ನು ಕಡ್ಡಾಯವಾಗಿ ಕಲಿಯಬೇಕು ಅನ್ನೂದು ಯಶ್ಟರಮಟ್ಟಿಗೆ ಸರಿ. ಉದಾಹರಣೆಗೆ, ಆಂದ್ರ ಪ್ರದೇಶದವರೆಲ್ಲ ಕಡ್ಡಾಯವಾಗಿ ಕನ್ನಡ ಕಲೀಬೇಕು ಅಂದ್ರೆ ಒಪ್ಪೋ ಮಾತ? ಅದೇ ರೀತಿ ಎಲ್ಲಾ ಕನ್ನಡಿಗರು ಕಡ್ಡಾಯವಾಗಿ ಹಿಂದಿ ಕಲಿಯಬೇಕು ಅನ್ನೋದು ಸರಿನ?

೩. ಭಾರತಕ್ಕ ಯಾವುದೇ ರಾಷ್ಟ್ರ ಭಾಷೆ ಇಲ್ಲ
ಭಾರತದ ಸಂವಿಧಾನ ಯಾವುದೇ ಒಂದು ನುಡಿಯನ್ನು ರಾಷ್ಟ್ರ ಭಾಷೆ ಮಾಡಲು ಅವಕಾಶ ಕೊಡುವುದಿಲ್ಲ. ೨೦೧೦ ರಲ್ಲಿ ಗುಜರಾತಿನ ಉನ್ನತ ನ್ಯಾಯಾಲಯ ಈ ವಿಶಯವನ್ನು ಸ್ಪಷ್ಟಪಡಿಸಿದೆ. ಹಿಂದಿ ಮತ್ತು ಆಂಗ್ಲ ಭಾರತ ಸರ್ಕಾರದ ಅಧಿಕೃತ ನುಡಿಗಳಶ್ಟೆ. ಕೇವಲ ಅಧಿಕೃತ ನುಡಿ ಅಂತ ಕಡ್ಡಾಯವಾಗಿ ಕಲಿಯಬೇಕು ಅನ್ನೂದು ಯಾವ ನ್ಯಾಯ.
೨೦೧೦ ರಲ್ಲಿ ಗುಜರಾತ್ ನ್ಯಾಯಾಲಯ ಹಿಂದಿ ರಾಷ್ಟ್ರಭಾಷೆ ಅಲ್ಲ ಅಂತ ಸ್ಪಷ್ಟ ಪಡಿಸಿರುವುದನ್ನು ಕೆಳಗೆ ಲಗತ್ತಿಸಲಾಗಿದೆ.


೪. ಕನ್ನಡ ಕರ್ನಾಟಕದಲ್ಲೇ ಪ್ರಾಮುಖ್ಯತೆ ಕಳೆದುಕೊಳ್ಳುವ ಭೀತಿ
ಆಂಗ್ಲ ನುಡಿಯ ಪ್ರಭಾವ ನಮ್ಮ ಮೇಲೆ ಆಗಲೇ ತುಂಬಾ ಇದೆ. ಹೆಚ್ಚು ಹೆಚ್ಚು ಕನ್ನಡಿಗರು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಿಸಿಕೊಳ್ಳುತ್ತಾರೆ. ಉನ್ನತ ಶಿಕ್ಷಣಗಳು ಆಂಗ್ಲದಲ್ಲೇ ಇರುತ್ತದೆ. ಖಾಸಗೀ ಕಚೇರಿಗಳಲ್ಲಿ ಆಂಗ್ಲ ನುಡಿಯೇ ಜಾಸ್ತಿ ಬಳಕೆಯಲ್ಲಿದೆ. ಕರ್ನಾಟಕ ಸರ್ಕಾರದ ದಾಖಲೆಗಳನ್ನು ಹೊರತುಪಡಿಸಿ ಉಳಿದೆಲ್ಲವು ಸಾಮಾನ್ಯವಾಗಿ ಆಂಗ್ಲದಲ್ಲೇ ಇರುವ ವಾಡಿಕೆ. ಕನ್ನಡಿಗರು ಕನ್ನಡದಿಂದ ಈಗಾಗಲೇ ಎಷ್ಟೋ ವಿಷಯಗಳಲ್ಲಿ ದೂರ ಸರಿದಿದ್ದಾರೆ.
ಹೀಗಿರುವಾಗ ಮೂರನೇ ನುಡಿಯನ್ನು ಕಡ್ಡಾಯಗೊಳಿಸಿದರೆ ಕನ್ನಡದ ಮೇಲೆ ಆಗುವ ಪರಿಣಾಮಗಳೇನು? ಹಿಂದಿಗೆ ಜಾಗಮಾಡುವುದಕ್ಕಾಗಿ ಕನ್ನಡವನ್ನು ಮೂರನೇ ಸ್ಥಾನಕ್ಕೆ ತಳ್ಳುವ ಅತವಾ ಕನ್ನಡವನ್ನು ಕೈಬಿಟ್ಟಿರುವ ಎಷ್ಟೋ ಉದಾಹರಣೆಗಳಿವೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿನದ ನಾಮ ಫಲಕಗಳಲ್ಲಿ ಕನ್ನಡಕ್ಕೆ ಮೂರನೇ ಸ್ಥಾನ. ರಾಷ್ಟ್ರೀಕೃತ ಬ್ಯಾಂಕುಗಳ ಚಲಾನುಗಳಲ್ಲಿ ಕನ್ನಡ ಮಾಯ. ಅಂಚೆ ಕಚೇರಿಗಳಲ್ಲಿ ಕನ್ನಡ ಮಾಯ. ಹೀಗೆ ಹತ್ತು ಹಲವಾರು. ಕರ್ನಾಟಕದಲ್ಲೇ ಕನ್ನಡಿಗನಿಗೆ ಕನ್ನಡದಲ್ಲಿ ಗ್ರಾಹಕ ಸೇವೆಗಳು ಸಿಗದಿರುವ ಅನೇಕ ಉದಾಹರಣೆಗಳಿವೆ.

೫. ವಲಸಿಗರಿಗೋಸ್ಕರ ೬ ಕೋಟಿ ಕನ್ನಡಿಗರು ಹೊರಗಿನ ನುಡಿಯನ್ನು ಕಡ್ಡಾಯವಾಗಿ ಕಲಿಬೇಕು ಅನ್ನೋದು ಸರಿಯಲ್ಲ  
ಮೂರ್ನುಡಿ ಪದ್ದತಿ ಪ್ರತಿಪಾದಿಸುವರು ಕೊಡುವ ಕಾರಣಗಳಲ್ಲಿ ಒಂದು ಇದು. ೬ ಕೋಟಿ ಕನ್ನಡಿಗರಲ್ಲಿ ವಲಸೆ ಹೋಗುವರು ಬೆರಳೆಣಿಕೆಯಷ್ಟು ಮಾತ್ರ. ವಲಸೆ ಹೋಗುವರಲ್ಲಿ ತುಂಬಾ ಮಂದಿ ನೆರೆ ರಾಜ್ಯಗಳಿಗೆ ಹೋಗ್ತಾರೆ. ನಮ್ಮ ನೆರೆ ರಾಜ್ಯಗಳಾವು ಹಿಂದಿ ರಾಜ್ಯಗಳಲ್ಲ. ಅದನಂತರ ವಲಸಿಗರು ದುಬೈ, ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ ದಂತಹ ದೇಶಗಳಿಗೆ ತೆರಳುತ್ತಾರೆ. ಹಿಂದಿ ಮಾತನಾಡುವ ರಾಜ್ಯಗಳಿಗೆ ಯಾರು ವಲಸೆ ಹೋಗಲ್ಲ, ಆ ರಾಜ್ಯಗಳಲ್ಲಿ ಉಯೋಗ ವ್ಯಾಪಾರ ಅವಕಾಶಗಳೂ ಇಲ್ಲ.
ಇನ್ನೂ ನಮ್ಮ ರಾಜ್ಯಕ್ಕೆ ಹೊರಗಿನಿಂದ ಬರುವ ವಲಸಿಗರನ್ನು ನೋಡಿದರೆ, ಇಲ್ಲೂ ನೆರೆ ರಾಜ್ಯಗಳಿಂದ ಬರುವ ವಲಸಿಗರಿಗೆ ಹೋಲಿಸಿದರೆ ಹಿಂದಿ ರಾಜ್ಯಗಳಿಂದ ಬರುವರು ಅತೀ ಕಮ್ಮಿ. ಒಂದು ಪಕ್ಷ ಬಂದರು, ಎಲ್ಲಿಂದಲೋ ಬರುವರನ್ನು ಸತ್ಕರಿಸಲು ೬ ಕೋಟಿ ಕನ್ನಡಿಗರು ಅವರ ಭಾಷೆ ಕಲೀಬೇಕಾ ? ಅದೂ ಬಾಲ್ಯದಿಂದಲೇ ? ವಿಪರ್ಯಾಸ !!

೬. ಉತ್ತರ ಭಾರತದ ರಾಜ್ಯಗಳು ತಮ್ಮ ತಾಯ್ನುಡಿ ಕಳೆದುಕೊಂಡ ಉದಾಹರಣೆಗಳು
ಉತ್ತರ ಭಾರತದ ಅನೇಕ ನುಡಿಗಳು ಸಾವಿರಾರು ವರ್ಷಗಳಿಂದ ಬೆಳೆದುಬಂದಿದ್ದರೂ, ಮೂರ್ನುಡಿ ಪದ್ಧತಿಯಿಂದಾಗಿ ನಶಿಸಿವೆ ಅಥವಾ ನಶಿಸುವ ಹಂತದಲ್ಲಿವೆ. ಇದಕ್ಕೆ ತುಂಬಾ ಉದಾಹರಣೆಗಳಿವೆ
ರಾಜಸ್ಥಾನ: ರಾಜಸ್ಥಾನಕ್ಕೆ ತನ್ನದೇ ಆದ ರಾಜಸ್ಥಾನಿ ನುಡಿ ಇದೆ. ಸಾವಿರಾರು ವರ್ಷಗಳಿಂದ ತನ್ನ ಉಪನುಡಿಗಳಾದ ಮಾರ್ವಾರಿ, ಮಾಲ್ವಿ, ಇತ್ಯಾದಿಗಳೊಂದಿಗೆ ಬೆಳೆದುಬಂದು ಸಮೃದ್ಧ ಸಾಹಿತ್ಯವನ್ನು ಒಳಗೊಂಡ ನುಡಿ. ಭಾರತಕ್ಕೆ ಸ್ವತಂತ್ರ ಬಂದಾಗ ರಾಜಸ್ಥಾನದಲ್ಲಿ ರಾಜಸ್ಥಾನಿ ನುಡಿಯೇ ಬಳಕೆಯಲ್ಲಿತ್ತು. ಆದರೆ ಮೂರ್ನುಡಿ ಪದ್ಧತಿ ತಂದಮೇಲೆ ತನ್ನ ಅಸ್ಮಿತೆಯನ್ನು ಕಳೆದುಕೊಂಡಿದೆ. ಇವತ್ತು ರಾಜಸ್ಥಾನದ ಅದಿಕ್ರುತ ನುಡಿ ರಾಜಸ್ಥಾನಿ ಅಲ್ಲ, ಹಿಂದಿ ಆಗಿದೆ. ಇದೊಂದು ದುರಂತವೇ ಸರಿ.
ಇದೆ ರೀತಿ ಬಿಹಾರಿ, ಸಂತಲಿ (ಝಾರ್ಖಂಡ್), ಕುರುಖ್, ಚತ್ತೀಸ್ಗರ್ಹಿ, ಪಹರಿ (ಹಿಮಾಚಲ ಪ್ರದೇಶ), ಉತ್ತರಾಖಂಡದ ಗರ್ಹ್ವಾಲ್ಯ್, ಕುಮೌನಿ, ಜಾವುನ್ಸ್ರಿ, ಬ್ರಜ್ಭಾಷಾ ಇನ್ನೂ ಹತ್ತಾರು ನೂರಾರು ನುಡಿಗಳು ಮೂರ್ನುಡಿ ಪದ್ದತಿಯ ಪ್ರವಾಹಕ್ಕೆ ಕೊಚ್ಚಿಹೋಗಿವೆ.

೭. ಆಂಗ್ಲ ಇಲ್ವಾ, ಹಿಂದಿನೂ ಇದ್ರೆ ತಪ್ಪೇನು
ಆಂಗ್ಲ ನುಡಿಯ ಅವಶ್ಯಕತೆಗಿಂತ ಅನಿವಾರ್ಯನೇ ಹೆಚ್ಚು. ತುಂಬಾ ಮಂದಿ ಆಂಗ್ಲ ಮಾಧ್ಯಮ ಬಯಸಲು ಕಾರಣ ಉನ್ನತಶಿಕ್ಷಣ ಕ್ಕೋಸ್ಕರ. ಜೊತೆಗೆ ಹೊರಗಿಂದ ಬಂದವರು ಮತ್ತು ಕನ್ನಡ ಗೊತ್ತಿಲ್ಲದವರಿಗೆ ಅನುಕೂಲವಾಗಲಿ ಅಂತ ಸಾರ್ವಜನಿಕ ಸೇವೆಗಳಲ್ಲಿ ಆಂಗ್ಲವನ್ನು ಸೇರಿಸಲಾಗಿದೆ. ಕನ್ನಡಿಗರಿಗೆ ಕನ್ನಡ, ಕನ್ನಡ ಬಾರದವರಿಗೆ ಆಂಗ್ಲ ಸಾಕು. ಇಲ್ಲಿ ಮೂರನೇ ನುಡಿಯ ಅವಶ್ಯಕತೆ ಏನು ಇಲ್ಲ. ಮೂರನೇ ನುಡಿಯಾಗಿ ಹಿಂದಿಯನ್ನು ಸೇರಿಸಿದರೆ ಕೇವಲ ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಹಿಂದಿ ಭಾಷಿಕರಿಗೂ ಉಳಿದವರಿಗೂ ಬೇದ ಭಾವ ಮಾಡಿದಂತೆ.
ಆಂಗ್ಲ ಇಲ್ವಾ, ಹಿಂದಿನೂ ಇದ್ರೆ ತಪ್ಪೇನು ಅನ್ನೋದಾದ್ರೆ, ನಾಳೆ ತಮಿಳು ತೆಲುಗು ಇದ್ರೆ ತಪ್ಪೇನು ಅಂತಾರೆ. ಹಾಗೆ ಎಲ್ಲ ಭಾಷೇನೂ ಹಾಕಕ್ಕೆ ಆಗುತ್ತಾ? ಇಲ್ಲ.

ಆದರ್ಶ್ ಭಾ ಮ 

ಭಾರತಕ್ಕೆ ರಾಷ್ಟ್ರ ಭಾಷೆ ಇಲ್ಲ

ಚಿಕ್ಕವನಿದ್ದಾಗ ಒಂದಿನ ಅದೇ ಮೊದ್ಲು ಮನೆಗೆ ದೂರದರ್ಶನ ಬಂದಿದ್ದು. ಅದು ಕಪ್ಪು-ಬಿಳಿಪಿನದಾಗಿತ್ತು. ನಾವೆಲ್ಲಾ ಕುತೂಹಲ ಹಾಗು ಕಾತುರದಿಂದ ಅದ್ರಲ್ಲಿ ಬರ್ತಿದ್ದ ಮಕ್ಕಳ ಕಾರ್ಯಕ್ರಮ ಸಂಗೀತ ಕಾರ್ಯಕ್ರಮ ಸಿನಿಮಾ ಹಾಡುಗಳು ಸಮಾಚಾರ ಗಳನ್ನೂ ನೋಡ್ತಿದ್ವಿ. ಅವಾಗೆಲ್ಲಿ ಕನ್ನಡ ಕಾರ್ಯಕ್ರಮಗಳು? ಬರ್ತಿದ್ದಿದ್ದು ಒಂದೇ ಚಾನಲ್ಲು. ಏನ್ ಬರುತ್ತೋ ಅದುನ್ನೇ ನೋಡೋದು. ಹಿಂದಿ ಅರ್ಥ ಆಗ್ದಿದ್ರೂ ಚಪಲದಿಂದ ನೋಡ್ತಿದ್ವಿ. ನೋಡಿ ನೋಡಿ ಒಂದ್ ಮಟ್ಟಕ್ಕೆ ಹಿಂದಿ ಅರ್ಥ ಆಗೋಕೆ ಶುರುವಾಯಿತು ಅಂದ್ಕೊಳ್ಳಿ. 1991 ಅಲ್ಲಿ ಕನ್ನಡದ ಚಂದನ ಕಾರ್ಯಕ್ರಮಗಳು ಶುರುವಾದ್ರೂ, ಇಡೀ ದಿನ ಹಿಂದಿ ಕಾರ್ಯಕ್ರಮಗಳ ಮದ್ಯೆ ಒಂದೆರಡು ಗಂಟೆಯಷ್ಟೇ ಕನ್ನಡ ಕಾರ್ಯಕ್ರಮ ಬರ್ತಿತ್ತು. 2000 ದ ನಂತರ ಚಂದನ ಬೇರೊಂದು ಚಾನಲ್ಲಾಗಿ ತರಲಾಯಿತು. ಹಿಂದಿ ದೂರದರ್ಶನ ಶುರುವಾಗಿದ್ದು 1959 ರಲ್ಲಿ. ಅದಾಗಿ 40 ವರ್ಷ ಬೇಕಾಯಿತು ಕನ್ನಡದ ಚಾನಲ್ ಬರೋಕೆ. ಇಷ್ಟೊತ್ತಿಗಾಗ್ಲೆ ನನ್ಮೇಲೆ ಧಾರಾಕಾರವಾಗಿ ಹಿಂದಿಯ ಸುರಿಮಳೆ ಆಗಿಹೋಗಿತ್ತು. ಮಾತೃ ಭಾಷೆಯಲ್ಲಿ ಮನರಂಜನೆ ಪಡೆಯೋದ್ರಿಂದ ವಂಚಿತರಾಗಿದ್ದಂತೂ ನಿಜ.
ಇಷ್ಟೊತ್ತಿಗೆ ನಾನು ಪ್ರೌಢಶಾಲೆ ಸೇರಿದೆ. ಪ್ರೌಢಶಾಲೆಗೆ ಬಂದಾಗ ಕನ್ನಡ ಆಂಗ್ಲ ಭಾಷೆಯ ಜೊತೆಗೆ ಹಿಂದಿ, ಒಟ್ಟು ಮೂರು ಭಾಷೆ ಕಲಿಯಲೇ ಬೇಕು ಅಂತ ಗೊತ್ತಿತ್ತು. ನಮ್ಮ ಹಿರಿಯ ವಿದ್ಯಾರ್ಥಿಗಳು ತಿಳಿಸಿದ್ದರು. ನಮಗೆ ತಿಳಿದೋ ತಿಳಿಯದೆನೋ ಹಿಂದಿನ ದೇಶದಲ್ಲಿ ಎಲ್ಲರು ಕಲೀಲೇಬೇಕು ಅನ್ನೋ ಭಾವನೆ ಹುಟ್ಟಿಕೊಂಡಿತ್ತು. ಮಾತೃ ಭಾಷೆಯಾದ್ರಿಂದ ಕನ್ನಡ, ಅಂತರ್ರಾಷ್ಟ್ರೀಯ ಭಾಷೆಯಾದ್ರಿಂದ ಆಂಗ್ಲ.

ಆರ್.ಟಿ.ಓ ದಲ್ಲಿ ನನ್ನ ಅನುಭವ

ಸರ್ಕಾರಿ ಕಚೇರಿಗೆ ಹೂಗ್ಬೀಕಂದ್ರೆ ನಂಗೆ ಎಲ್ಲಿಲ್ಲದ ಜಿಗುಪ್ಸೆ. ಇದು ಪ್ರತಿಯೊಬ್ಬರ ಅನಿಸಿಕೆಯೂ ಆಗಿದೆ ಅಂತ ಭಾವಸ್ತೀನಿ. ಕಚೀರಿಗಳ ಬಾಗ್ಲು ತೆಗಿಯೋದೆ ಲೇಟು, ತೆಗುದ್ರು ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬರಲ್ಲ, ಬಂದ್ರು ತಕ್ಷಣ ನಮ್ಮ ಕೆಲಸ ಆಗುತ್ತೆ ಅನ್ನೋ ಭರವಸೆ ಇಲ್ಲ, ಅಧಿಕಾರಿಗಳ ಮುಂದೆ ಬಗ್ಬೇಕು ಬೇಡಬೇಕು, ಅದೂ ಸಾಲಲಿಲ್ಲ ಅಂದ್ರೆ ಅವ್ರ ಕೈ ಬಿಸಿನೂ ಮಾಡ್ಬೇಕು. ತುಂಬಾ ಜನ ಇದ್ಯಾವ್ ರಗ್ಳೆ ಅಂತ ಏಜೆಂಟ್ಗಳಿಗೆ ದುಡ್ಡು ಚಲ್ಲಿ ಕೈ ತೊಳ್ಕನ್ತಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರವು ತನ್ನ ಕಚೇರಿಗಳಲ್ಲಿ ನಾಗರೀಕರ ಅನುಭವವನ್ನು ಉತ್ತಮಗೊಳಿಸಲು ಯೋಜನೆಗಳನ್ನು ಜಾರಿಗೆ ತಂದಿದೆ. ಉದಾಹರ್ಣೆಗೆ, “ಸಕಾಲ”, RTI (Right to Information Act), ಮತ್ತಿತರ. ಈ ಯೋಜನೆಗಳು ಸರ್ಕಾರಿ ಕಚೇರಿಗಳ ಕಾರ್ಯವೈಖರಿಯಲ್ಲಿ ಸುಧಾರಣೆಗಳನ್ನು ತರುತ್ತಿದೆಯಾದರೂ ಖಾಸಗೀ ಸಂಸ್ತೆಗಳು ಕೊಡಬಲ್ಲ ಸೇವೆಯ ಗುಣಮಟ್ಟಕ್ಕೆ ತಲುಪಬೇಕಾದರೆ ಇನ್ನು ಹಲವಾರು ಬದಲಾವಣೆಗಳನ್ನು, ನಿಯಮಗಳನ್ನು ಜಾರಿಗೆ ತರ್ಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನನ್ನ ಇತ್ತೀಚಿನ ಒಂದು ಅನುಭವವನ್ನು ಈ ಬರಹದ ಮೂಲಕ ಹಂಚಿಕೊಳ್ಳುತ್ತಿದೇನೆ.

ಕೌಟುಂಬಿಕತೆ ಮತ್ತು ಬ್ರಷ್ಥಾಚಾರ

“ದುಡ್ಡೇ ದೊಡ್ಡಪ್ಪ” ಎಂಬ ಮಾತಿನಂತೆ, ದೈನಂದಿನ ಜೀವನ ಸುಗಮವಾಗಿ ಸಾಗಿಸವಲ್ಲಿ ಹಣದ ಪಾತ್ರ ಬಹುಮುಖ್ಯ. ವರ್ಷಗಳು ಕಳೆದಂತೆ  ಬದುಕಿನ ಶೈಲಿ ಬದಲಾಗುತ್ತಿದೆ. ಉತ್ತಮ ಹಾಗು ಐಶಾರಾಮಿ ಜೀವನ ಶೈಲಿಗಾಗಿ ಅವಶ್ಯಕವಾದ ಎಲ್ಲಾ ವಸ್ತೋಪಕರ್ಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದನ್ನೆಲ್ಲಾ ತಮ್ಮದಾಗಿಸಿಕೊಂಡು ಜೀವನ ಶೈಲಿಯನ್ನು ಉತ್ತಮಗೊಲಿಸಿಕೊಳ್ಳಬೇಕಾದರೆ ಹಣ ಬೇಕು. ಮನುಷ್ಯ ಕೌಟುಂಬಿಕ ಜೀವಿ. ಕೇವಲ ತನಗಷ್ಟೇ ಅಲ್ಲದೆ ಕುಟುಂಬದ ಎಲ್ಲ ಸದಸ್ಯರಿಗೂ ಎಟುಕುವಂತೆ ಮಾಡುವ ಜವಾಬ್ದಾರಿ ಕುಟುಂಬದ ಮುಖ್ಯಸ್ತನ ಮೇಲಿರುತ್ತದೆ.

ರಸ್ತೆಯಲ್ಲಿ ಶಬ್ಧ ಮಾಲಿನ್ಯ

ಬೆಂಗಳೂರಿನಲ್ಲಿ ಜನಸಂಖ್ಯೆಯ ಜೊತೆಗೆ ವಾಹನಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿರುವ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಬೆಂಗಳೂರು ನಗರ ಸಂಚಾರ ಪೋಲಿಸ್ ಅವರ ಮಾಹಿತಿ ಪ್ರಕಾರ ೧೯೯೧ರಲ್ಲಿ ಕೇವಲ ೬ ಲಕ್ಷ ವಾಹನಗಲಿದ್ದರೆ, ೨೦೧೧ರಲ್ಲಿ ವಾಹನಗಳ ಸಂಖ್ಯೆ ಸುಮಾರು ೪೦ ಲಕ್ಷ. ೨೦೧೩ ರಲ್ಲಿ ೪೪ ಲಕ್ಷ. ಅಂದರೆ ಪ್ರತಿ ಇಬ್ಬರಿಗೆ ಒಂದು ವಾಹನದಂತೆ. ಪ್ರತಿ ವರ್ಷ ಶೇ. ೭-೧೦ ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಬೆಳೆಯುತ್ತಿರುವ ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆಗಳನ್ನು ಹಾಗು ಸಂಚಾರ ನಿಯಂತ್ರಣ ನಿಯಮಗಳನ್ನು, ವ್ಯವಸ್ತೆಗಳನ್ನು ವದಗಿಸುವಲ್ಲಿ ಸರಕಾರ ವಿಫಲವಾಗಿದೆ. ಇದರ ಪರಿಣಾಮವೇ ಸಂಚಾರ ದಟ್ಟಣೆ.
ಟ್ರಾಫಿಕ್ ಸಿಗ್ನಲ್ ಗಾಗಿ ಕಿಲೋಮೀಟರು ಗಟ್ಟಲೆ ವಾಹನಗಳು ನಿಲ್ಲುವುದು, ಸಂಚಾರ ದಟ್ಟಣೆ ಆಗುವುದು ಬೆಂಗಳೂರಿನಲ್ಲಿ ಸರ್ವೆಸಾಮನ್ಯ. ದಿನನಿತ್ಯ ಶಾಲಾಕಾಲೇಜು, ಆಫೀಸುಗಳಿಗೆ ಓಡಾಡುವ ಜನರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿರುವುದು ನಮಗೆಲ್ಲಾ ಗೊತ್ತಿರುವ ವಿಷಯವೆ. ದೈನಂದಿನ ಸಮಯದಲ್ಲಿ ಪ್ರಮುಖವಾದ ಒಂದು ಭಾಗವನ್ನು ರಸ್ತೆಯಲ್ಲೇ ಕಳೆಯುತ್ತೇವೆ.