ಸರ್ಕಾರಿ ಕಚೇರಿಗೆ ಹೂಗ್ಬೀಕಂದ್ರೆ ನಂಗೆ ಎಲ್ಲಿಲ್ಲದ ಜಿಗುಪ್ಸೆ. ಇದು ಪ್ರತಿಯೊಬ್ಬರ ಅನಿಸಿಕೆಯೂ ಆಗಿದೆ ಅಂತ ಭಾವಸ್ತೀನಿ. ಕಚೀರಿಗಳ ಬಾಗ್ಲು ತೆಗಿಯೋದೆ ಲೇಟು, ತೆಗುದ್ರು ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬರಲ್ಲ, ಬಂದ್ರು ತಕ್ಷಣ ನಮ್ಮ ಕೆಲಸ ಆಗುತ್ತೆ ಅನ್ನೋ ಭರವಸೆ ಇಲ್ಲ, ಅಧಿಕಾರಿಗಳ ಮುಂದೆ ಬಗ್ಬೇಕು ಬೇಡಬೇಕು, ಅದೂ ಸಾಲಲಿಲ್ಲ ಅಂದ್ರೆ ಅವ್ರ ಕೈ ಬಿಸಿನೂ ಮಾಡ್ಬೇಕು. ತುಂಬಾ ಜನ ಇದ್ಯಾವ್ ರಗ್ಳೆ ಅಂತ ಏಜೆಂಟ್ಗಳಿಗೆ ದುಡ್ಡು ಚಲ್ಲಿ ಕೈ ತೊಳ್ಕನ್ತಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರವು ತನ್ನ ಕಚೇರಿಗಳಲ್ಲಿ ನಾಗರೀಕರ ಅನುಭವವನ್ನು ಉತ್ತಮಗೊಳಿಸಲು ಯೋಜನೆಗಳನ್ನು ಜಾರಿಗೆ ತಂದಿದೆ. ಉದಾಹರ್ಣೆಗೆ, “ಸಕಾಲ”, RTI (Right to Information Act), ಮತ್ತಿತರ. ಈ ಯೋಜನೆಗಳು ಸರ್ಕಾರಿ ಕಚೇರಿಗಳ ಕಾರ್ಯವೈಖರಿಯಲ್ಲಿ ಸುಧಾರಣೆಗಳನ್ನು ತರುತ್ತಿದೆಯಾದರೂ ಖಾಸಗೀ ಸಂಸ್ತೆಗಳು ಕೊಡಬಲ್ಲ ಸೇವೆಯ ಗುಣಮಟ್ಟಕ್ಕೆ ತಲುಪಬೇಕಾದರೆ ಇನ್ನು ಹಲವಾರು ಬದಲಾವಣೆಗಳನ್ನು, ನಿಯಮಗಳನ್ನು ಜಾರಿಗೆ ತರ್ಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನನ್ನ ಇತ್ತೀಚಿನ ಒಂದು ಅನುಭವವನ್ನು ಈ ಬರಹದ ಮೂಲಕ ಹಂಚಿಕೊಳ್ಳುತ್ತಿದೇನೆ.
ನನ್ ಹತ್ರ ದ್ವಿಚಕ್ರ ವಾಹನ ಚಲಿಸುವ ಲೈಸೆನ್ಸ್ ಇರ್ಲಿಲ್ಲ. ಅದನ್ನು ಪಡೆದುಕೊಳ್ಳಲು ಬೆಂಗಳೂರಿನ ಕೃಷ್ಣರಾಜಪುರಂ ಆರ್.ಟಿ.ಓ ಗೆ ಹೋಗಿದ್ದೆ. ಮೊದಲಿಗೆ ಕಲಿಯುವವರ ಲೈಸೆನ್ಸ್ ಪಡೆದುಕೊಳ್ಳಬೇಕಿತ್ತು. ಇದಕ್ಕೆ ನಾಲ್ಕು ಹಂತಗಳಿವೆ.
೧. ಮೊದಲಿಗೆ ರೂ. ೬೦/- ಶುಲ್ಕ ಕಟ್ಟಲು ಸಾಲಿನಲ್ಲ ನಿಂತೆ.
೨. ನಂತರ ARTO ಅವರ ಸಹಿಗಾಗಿ ಮತ್ತೆ ಸಾಲಲ್ಲಿ ನಿಂತೆ. ಈ ಬಾರಿ ತುಂಬಾ ಹೊತ್ತು ಕಾಯಬೆಕಾಇತು, ಸಾಲು ತುಂಬಾ ದೊಡ್ಡದಿತ್ತು. ಸಹಿ ಹಾಕುಸ್ಕೊಲ್ಲೋ ಹೊತ್ತಿಗೆ ನಾನ್ ಆಗಲೇ ೨೦ ನಿಮ್ಷ ಈ ಸಾಲಲ್ಲಿ ನಿಂತಿದ್ದೆ.
೩ ಇದಾದಮೇಲೆ ಏನು ಅಂತ ಕೇಳಿದ್ರೆ, ರೂಂ ಸಂಖ್ಯೆ ೨ ಕ್ಕೆ ಹೋಗಿ ಸಾರ್ ಅಂದ್ರು. ಅಲ್ಲಿಗೆ ಹೋದ್ರೆ ಮತ್ತೆ ಸಾಲಲ್ಲಿ ನಿಲ್ಲುಸ್ಬೇಕೆ? ನನ್ನ ತಾಳ್ಮೆ ಪರೀಕ್ಷೆ ಆಗ್ತಿದೆ ಅಂತ ಅನ್ನುಸ್ತು. ಲೈಸೆನ್ಸ್ ಪರೀಕ್ಷೆ ತಗೋಬೆಕಿದ್ದ ಇನ್ಸ್ಪೆಕ್ಟರ್ ಅಲ್ಲಿ ಇರ್ಲಿಲ್ಲ. ೧೫ ನಿಮ್ಷ ಕಾದ್ಮೆಲೆ ಅವರು ಬಂದ್ರು. ಮತ್ತೆ ಸಾಲಲ್ಲಿ ೧೦ ನಿಮ್ಷ ಕಾದು, ನನ್ನ ಸರದಿ ಬಂತು. ಪರೀಕ್ಷೆಯಲ್ಲೇನೋ ಪಾಸ್ ಆದೆ, ಆದ್ರೆ ಇನ್ಸ್ಪೆಕ್ಟರ್ ಹೇಳಿದ್ದು “ಒಂದ್ವಾರ ಬಿಟ್ಟು ಬನ್ನಿ” ಅಂತ. ಅಂದರೆ ಇಷ್ಟು ಹೊತ್ತು ಸಾಲುಗಳಲ್ಲಿ ನಿಂತು, ಸಂಯಮದಿಂದ ಕಾದು, ಮತ್ತೆ ಒಂದ್ ವಾರ ಕಾಯ್ಬೇಕು ಲೈಸೆನ್ಸ್ ಸಿಗಕ್ಕೆ. ಇನ್ನೇನು ಮಾಡಕ್ಕೆ ಆಗುತ್ತೆ? ಕಾಯಲೇಬೇಕು ಅಂತ ಅಂದ್ಕೊಂಡು ಅಲ್ಲಿಂದ ಹೊರಟೆ. ಅಷ್ಟ್ಹೋತ್ತಿಗೆ ಸಮಯ ಮದ್ಯಾಹ್ನ ೧೨.೧೫. ಇಷ್ಟು ಕೆಲಸಕ್ಕೆ ಬರೋಬ್ಬರಿ ಎರಡು ಗಂಟೆ ತಗಳ್ತು.
೪. ಒಂದ್ ವಾರ ಬಿಟ್ಟು ಕಲಿಯುವವರ ಲೈಸೆನ್ಸ್ ತಗಳಕ್ಕೆ ಮತ್ತೆ ಕೃಷ್ಣರಾಜಪುರಂ ಆರ್.ಟಿ.ಓ ಗೆ ಹೋದೆ. ಆವತ್ತು ನಾನು ಆಫೀಸ್ ಗೆ ಬೇಗ ಹೋಗ್ಬೇಕಿತ್ತು. ಆದರೆ ಆರ್.ಟಿ.ಓ ೧೦ ಗಂಟೆ ಮುಂಚೆ ತೆಗಿಯಲ್ಲ. ಸರಿ ಅಂತ ಒಂದು ಉಪಾಯ ಮಾಡಿದೆ. ೧೦ ಗಂಟೆಗೆ ಸರಿಯಾಗಿ ಆರ್.ಟಿ.ಓ ಗೆ ಹೋದ್ರೆ, ೫ ನಿಮ್ಷ ದಲ್ಲಿ ಲೈಸೆನ್ಸ್ ಪಡೆದುಕೊಂಡು, ಅಲ್ಲಿಂದ ಸೀದಾ ಆಫೀಸ್ ಗೆ ಹೋಗಬಹುದು ಅಂತ. ೧೦ ಗಂಟೆಗೆ ಇನ್ನು ೫ ನಿಮ್ಷ ಇರುವಾಗಲೇ ನಾನು ಆರ್.ಟಿ.ಓ ಗೇಟ್ ಮುಂದೆ ಇದ್ದೆ. ಆದ್ರೆ ಗೇಟ್ ತೆಗ್ದಿದ್ದು ೧೦ ಗಂಟೆ ಆಗಿ ೧೦ ನಿಮ್ಷ ಆದ್ಮೆಲೇನೆ. ೧೦.೧೫ ಕ್ಕೆ ಅಲ್ಲಿ ನಿಧಾನವಾಗಿ ಚಟುವಟಿಕೆಗಳು ಪ್ರಾರಂಭವಾದವು. ನನ್ನ ಅಂದಿನ ದಿನದ ಯೋಜನೆಗಳು ಉಲ್ಟಾ ಆಗುತ್ತಿರುವುದು ಕಣ್ಣಿನ ಮುಂದೆ ಭಾಸವಾಗುತ್ತಿತ್ತು. ಇದನ್ನೇ ಯೋಚಿಸುತ್ತಾ ಲೈಸನ್ಸ್ ಪಡೆಯುವ ಕೊಠಡಿಗೆ ದವಡಾಯಿಸಿದೆ. ಅಲ್ಲಿ ಮತ್ತೆ ನಿರಾಸೆ. ಲೈಸೆನ್ಸ್ ಪತ್ರ ಕೊಡ್ಬೇಕಿದ್ದ ಅಧಿಕಾರಿ ಇನ್ನು ಬಂದಿರಲಿಲ್ಲ. ಎಷ್ಟು ಹೊತ್ತಿಗೆ ಬರ್ತಾರೆ ಅಂತ ಯಾರಿಗೆ ಕೇಳಿದ್ರು ಗೊತ್ತಿಲ್ಲ. ಕಾಯಬೇಕೋ, ಕಾದರೆ ಆಫೀಸ್ ಗೆ ಲೇಟ್ ಆಗುತ್ತೇನೋ ಎಂಬ ಚಿಂತೆ ಶುರುವಾಯ್ತು. ಇಷ್ಟು ದೂರ ಬಂದಾಯ್ತು, ಕಾದು ಲೈಸೆನ್ಸ್ ಪಡೆದೇ ಹೋಗೋಣ ಅಂತ ನಿರ್ಣಯ ಮಾಡಿ ಕಾಯುತ್ತಾ ಕುಳಿತೆ. ಕೊನೆಗೂ ಆ ಅಧಿಕಾರಿಯ ದರ್ಶನವಾಯ್ತು. ಪುಣ್ಯಾತ್ಗಿತ್ತಿ ೧೧.೨೦ ಕ್ಕೆ ಆಫೀಸ್ ಗೆ ಬಂದ್ಲು. ಮೇಡಂ ನನ್ನ ಕಲಿಯುವವರ ಲೈಸೆನ್ಸ್ ತಗೋಬೇಕು ಅಂತ ಕೇಳ್ದಾಗ, “ಅಲ್ಲಿಂದ ನಿಮ್ಮ ಫೈಲ್ ತಗೊಂಡ್ ಬನ್ನಿ” ಅಂತ ನಂಗೇ ಆದೇಶ ಮಾಡಿದ್ರು. ತಿರ್ಗಿ ನೋಡಿದರೆ ಅಲ್ಲಿ ರಾಶಿ ಫೈಲುಗಲಿದ್ವು. ಅದ್ರಲ್ಲಿ ನನ್ನ ಫೈಲ್ ಹುಡುಕಿ ಕೊಟ್ಟೆ. ಫೈಲ್ ಒಳಗಿದ್ದ ಲೈಸೆನ್ಸ್ ಗೆ ಒಂದು ಸಹಿ ಹಾಕಿ ಕೊಟ್ಟರು. ಕೊನೆಗೂ ಕಲಿಯುವವರ ಲೈಸೆನ್ಸ್ ನನ್ನ ಕೈ ಸೇರ್ತು.
ಇದಕ್ಕೇ ಇಷ್ಟು ಪರ್ದಾಡ್ಬೇಕು ಅಂದ್ರೆ, ವಾಹನ ಚಲಾಯಿಸುವ ಲೈಸೆನ್ಸ್ ಗೆ ಇನ್ನು ಎಷ್ಟು ಪರ್ದಾಡ್ಬೇಕಪ್ಪ ಅಂದ್ಕೊಂಡೆ? ವಾಹನ ಚಲಾಯಿಸುವ ಲೈಸೆನ್ಸ್ ಪಡೆಯಲು ಹೋದಾಗ ಬರೋಬ್ಬರಿ ಎಂಟು ಸಾರಿ ಸಾಲು ಹಚ್ಚಬೆಕಾಇತು. ಹಣ ಪಾವತಿಸಲು ಸಾಲು, ARTO ಸಹಿ ಹಾಕಲು ಸಾಲು, biometric ಗೆ ಸಾಲು, ಡಾಟ ಎಂಟ್ರಿ ಗೆ ಸಾಲು, ದಾಕಲೆ ಪರಿಶೀಲನೆಗೆ ಸಾಲು, ಡ್ರೈವಿಂಗ್ ಟೆಸ್ಟ್ ಕೊಡುವುದಕ್ಕೆ ಇನ್ಸ್ಪೆಕ್ಟರ್ ಗಾಗಿ ಒಂದು ಗಂಟೆ ಹದಿನೈದು ನಿಮ್ಷ ಕಾದೆ, ಅದಾದ ಮೇಲೆ ಅಂತಿಮ ತಪಾಸಣೆಗಾಗಿ ಮುಕ್ಕಾಲು ಗಂಟೆ ಕಾದೆ. ಬೆಳೆಗ್ಗೆ ೧೦.೩೦ ಕ್ಕೆ ಆರ್.ಟಿ.ಓ ಗೆ ಹೋದವನು, ಹೊರಗೆ ಬಂದಾಗ ಮದ್ಯಾಹ್ನ ೩ ಗಂಟೆ.
೨೧ ನೇ ಶತಮಾನದಲ್ಲೂ ಲೈಸೆನ್ಸ್ ಕೊಡುವ ಪ್ರಾಧಿಕಾರ ಇನ್ನು ಹಳೆ ಕಾಲ್ದಲ್ಲಿದೆ. ಲೈಸೆನ್ಸ್ ಗೆ ಅಂತ ಹೋದ್ರೆ ನಮ್ಮ ಇಡೀ ದಿನ ಇಲ್ಲೇ ಕಳೆದುಹೋಗುತ್ತದೆ. ಕಾಲ ಬದಲಾದಂತೆ ಅದಕ್ಕನುಗುಣವಾಗಿ ಕಚೇರಿಗಳು ತಮ್ಮ ಕಾರ್ಯವೈಖರಿಯನ್ನು ಬದಲ್ಲಾಯಿಸಿಕೊಳ್ಳುವ ಅವಶ್ಯಕತೆ ಇದೆ. ಉದಾಹರಣೆಗೆ, ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಬಹಳ ವರ್ಷಗಳಿಂದ ಗ್ರಾಹಕರ ಸೇವೆ ಸಲ್ಲಿಸುತ್ತಿದೆ. ಆದರೆ ಇಂದು ತನ್ನ ಸೇವಾ ವೈಖರಿಯನ್ನು ತನ್ನ ಗರಹಕರ ಅನುಗುಣವಾಗಿ ಹಲವಾರು ರೀತಿಯಲ್ಲಿ ಬದಲಾಯಿಸಿಕೊಂಡಿದೆ. ಅದರಲ್ಲಿ ಒಂದು “ಸಿಂಗಲ್ ಕೌಂಟರ್ ಸಿಸ್ಟಮ್” (single counter system). ಅಂದ್ರೆ, ಗ್ರಾಹಕ ಬ್ಯಾಂಕ್ ಗೆ ಬಂದಾಗ ಅಲ್ಲಿನ ಯಾವ್ದೇ ಕೌಂಟರ್ ಗೆ ಹೊದ್ರೂ ತನ್ನ ಎಲ್ಲ ವಹಿವಾಟುಗಳನ್ನೂ ಒಂದೇ ಕೌಂಟರ್ ನಲ್ಲಿ ಮಾಡಬಹುದಾದ ಸೌಕರ್ಯ. ಬ್ಯಾಂಕ್ ಖಾತೆ ತೆಗಿಬೇಕಾದ್ರೆ ರಶೀದಿ ಕೊಡಲು ಒಂದು ಕೌಂಟರ್, ದಾಕಲೆ ಪರಿಶೀಲನೆಗೆ ಒಂದು ಕೌಂಟರ್, ಹಣ ಪಾವತಿಸಲು ಒಂದು ಕೌಂಟರ್, ಕೊನೆಗೆ ಖಾತೆ ತೆರೆಯಲು ಒಂದು ಕೌಂಟರ್ ಇರುವುದಿಲ್ಲ. ಈ ಎಲ್ಲ ಕೆಲಸಗಳನ್ನು ಒಂದೇ ಕೌಂಟರ್ ನಲ್ಲಿ ಮಾಡಿಕೊಡಲಾಗುತ್ತದೆ. ಖಾತೆಯನ್ನು ಅದೇ ಕೌಂಟರ್ ನಲ್ಲಿ ತಕ್ಷಣವೇ ತೆರೆಯಲಾಗುತ್ತದೆ. ಇದರಿಂದ ಗ್ರಾಹಕನು ಕೌಂಟರ್ ನಿಂದ ಕೌಂಟರ್ ಗೆ ಹೋಗುವುದು, ಹಲವಾರುಸರಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ, ಗ್ರಾಹಕನ ಕೆಲಸವೂ ಕ್ಷಣಮಾತ್ರದಲ್ಲಿ ಪೂರ್ಣಗೊಳ್ಳುತ್ತದೆ.
ಇಂತಹ ಬದಲಾವಣೆಯನ್ನು ಆರ್.ಟಿ.ಓ ದಲ್ಲೂ ಅಳವಡಿಸುವುದರಿಂದ ಅರ್ಜಿದಾರರ ಕೆಲಸ ಕ್ಷಣಮಾತ್ರದಲ್ಲಿ ಪೂರ್ಣಗೊಳ್ಳುವುದರ ಜೊತೆಗೆ ಕಚೇರಿಯಲ್ಲಿನ ಅನುಭವವೂ ಸಿಹಿಯಾಗಿರುತ್ತದೆ.
- ಆದರ್ಶ್
No comments:
Post a Comment