ರಸ್ತೆಯಲ್ಲಿ ಶಬ್ಧ ಮಾಲಿನ್ಯ

ಬೆಂಗಳೂರಿನಲ್ಲಿ ಜನಸಂಖ್ಯೆಯ ಜೊತೆಗೆ ವಾಹನಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿರುವ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಬೆಂಗಳೂರು ನಗರ ಸಂಚಾರ ಪೋಲಿಸ್ ಅವರ ಮಾಹಿತಿ ಪ್ರಕಾರ ೧೯೯೧ರಲ್ಲಿ ಕೇವಲ ೬ ಲಕ್ಷ ವಾಹನಗಲಿದ್ದರೆ, ೨೦೧೧ರಲ್ಲಿ ವಾಹನಗಳ ಸಂಖ್ಯೆ ಸುಮಾರು ೪೦ ಲಕ್ಷ. ೨೦೧೩ ರಲ್ಲಿ ೪೪ ಲಕ್ಷ. ಅಂದರೆ ಪ್ರತಿ ಇಬ್ಬರಿಗೆ ಒಂದು ವಾಹನದಂತೆ. ಪ್ರತಿ ವರ್ಷ ಶೇ. ೭-೧೦ ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಬೆಳೆಯುತ್ತಿರುವ ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆಗಳನ್ನು ಹಾಗು ಸಂಚಾರ ನಿಯಂತ್ರಣ ನಿಯಮಗಳನ್ನು, ವ್ಯವಸ್ತೆಗಳನ್ನು ವದಗಿಸುವಲ್ಲಿ ಸರಕಾರ ವಿಫಲವಾಗಿದೆ. ಇದರ ಪರಿಣಾಮವೇ ಸಂಚಾರ ದಟ್ಟಣೆ.
ಟ್ರಾಫಿಕ್ ಸಿಗ್ನಲ್ ಗಾಗಿ ಕಿಲೋಮೀಟರು ಗಟ್ಟಲೆ ವಾಹನಗಳು ನಿಲ್ಲುವುದು, ಸಂಚಾರ ದಟ್ಟಣೆ ಆಗುವುದು ಬೆಂಗಳೂರಿನಲ್ಲಿ ಸರ್ವೆಸಾಮನ್ಯ. ದಿನನಿತ್ಯ ಶಾಲಾಕಾಲೇಜು, ಆಫೀಸುಗಳಿಗೆ ಓಡಾಡುವ ಜನರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿರುವುದು ನಮಗೆಲ್ಲಾ ಗೊತ್ತಿರುವ ವಿಷಯವೆ. ದೈನಂದಿನ ಸಮಯದಲ್ಲಿ ಪ್ರಮುಖವಾದ ಒಂದು ಭಾಗವನ್ನು ರಸ್ತೆಯಲ್ಲೇ ಕಳೆಯುತ್ತೇವೆ.


ಹೀಗಿರುವಾಗ, ರಸ್ತೆಗಳಲ್ಲಿ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಪ್ರಮುಖವಾದುದು ನಮಗೆಲ್ಲ ಗೊತ್ತಿರುವಹಾಗೆ ವಾಯುಮಾಲಿನ್ಯ. ಇದರಿಂದ ನಮಗೆ ಉಸಿರಾಡಲು ಒಳ್ಳೆಯ ಗಾಳಿ ಸಿಗದೇ, ದೈಹಿಕವಾಗಿ ಆರೋಗ್ಯದಮೇಲೆ ತೊಂದರೆಗಳಾಗಬಹುದು. ವಾಯುಮಾಲಿನ್ಯಗಿಂತ ಪ್ರಮುಖವಾದ ಸಮಸ್ಯೆ ಇನ್ನೊಂದಿದೆ. ಬಹಳಷ್ಟು ಜನರಿಗೆ ಇದು ಸಮಸ್ಯೆಯಂಬ ಅರಿವು ಕೂಡ ಇರುವುದಿಲ್ಲ. ಅದೇ ಶಬ್ದ ಮಾಲಿನ್ಯ. ವಾಯುಮಾಲಿನ್ಯ ನಮ್ಮ ದೇಹದ ಆರೋಗ್ಯದಮೇಲೆ ಪರಿಣಾಮವನ್ನುಂಟು ಮಾಡಿದರೆ, ಶಬ್ಧ ಮಾಲಿನ್ಯ ನೇರವಾಗಿ ನಮ್ಮ ಮನಸ್ಸಿನ ಆರೋಗ್ಯ ಹಾಗು ಮನಸ್ಥಿತಿಯಮೀಲೆ ಪರಿಣಾಮ ಬೀರುತ್ತದೆ.
ಶಬ್ಧಮಾಲಿನ್ಯದ ಪರಿಣಾಮಗಳು ಹೀಗಿವೆ.
೧. ಪ್ರಮುಖವಾಗಿ ತಕ್ಷಣ ಗಮನಕ್ಕೆ ಬರುವುದು: ಮನಸ್ಸಿಗೆ ಕಿರಿಕಿರಿ ಉಂಟಾಗುವುದು, ಸಿಟ್ಟು ಹಾಗು ಕೋಪ ಹೆಚ್ಚಾಗುವುದು.
೨. ಮನಸ್ಸಿನ ಸಮಾಧಾನ - ನೆಮ್ಮದಿ ಕಡಿಮೆಯಾಗುವುದು. ಇದರಿಂದ ಸಣ್ಣ ಪುಟ್ಟ ವಿಶಯಗಳಿಗೆ ಜಗಳಕ್ಕಿಳಿಯುವ ಪ್ರವೃತ್ತಿ ಬೆಳೆಯುವುದು.
೩. ಮನಸ್ಸಿನ ಏಕಾಗ್ರತೆ ಹಾಗು ಕ್ರಿಯಾಶೀಲತೆ ಕಡಿಮೆಯಾಗುವುದು.
೪. ಮನಸ್ಸಿನ ಉದ್ವೇಗ ಹೆಚ್ಚುವುದು, ಒತ್ತಡ ಹೆಚ್ಚುವುದು. ಇದರಿಂದ ರಕ್ತದೊತ್ತದವು ಹೆಚ್ಚುವ ಸಾದ್ಯತೆ.
೫. ಕಿವಿಮೊರೆತ: ಅಂದರೆ ನಮ್ಮ ಸುತ್ತ-ಮುತ್ತ ಯಾವ ಶಬ್ಧವಾಗದಿದ್ದರೂ, ನಮಗೆ ಏನೋ ಶಬ್ಧವಾಗುತ್ತಿರುವಂತೆ ಭಾಸವಾಗುವುದು. ಉದಾಹರಣೆಗೆ ನಮ್ಮ ಸುತ್ತ ನಿಶ್ಯಬ್ಧವಿದ್ದರೂ ಯಾರೊ ಸೀಟಿ ಹೊಡೆದಂತೆ, ವಾಹನಗಳ ಶಬ್ಧ ಅಥವಾ ಕಪ್ಪೆಗಳು, ಹುಳಗಳ ಶಬ್ಧ, ಮತ್ತಿತರ ಶಬ್ಧ ಕೇಳುವುದು.
೬. ಸರಿಯಾಗಿ ನಿದ್ದೆ ಬಾರದಿರುವುದು.
೭. ಕಿವುಡುತನ, ಮತ್ತಿರ ತೊಂದರೆಗಳು.


ಶಬ್ಧದ ತೀವ್ರತೆಯನ್ನು “ಡೆಸಿಬೆಲ್” (decibel) ನಿಂದ ಅಳೆಯುತ್ತಾರೆ. ಮಾನವನ ಕಿವಿ ಹಾಗು ಮನಸ್ಸಿಗೆ ಸುರಕ್ಷಿತವಾದ ಶಬ್ಧ ತೀವ್ರತೆಯು 0 ಡೆಸಿಬೆಲ್ ನಿಂದ ೭೫ ಡೆಸಿಬೆಲ್ ವರೆಗೆ ಆಗಿದೆ. ೭೫ ದಕ್ಕಿಂತ ಹೆಚ್ಚು ಡೆಸಿಬೆಲ್ ಇರುವ ಶಬ್ಧ ತೀವ್ರತೆಯು ನಮ್ಮ ಕಿವಿ, ಮನಸ್ಸು ಹಾಗು ದೈನಂದಿನ ಚಟುವಟಿಕೆಯ ಮೇಲೆ ದುಷ್ಪರಿಣಾಮವನ್ನು ಮಾಡುವ ಸಾಧ್ಯತೆ ಇದೆ. ಬೆಂಗಳೂರು ನಗರ ಸಂಚಾರ ಪೋಲಿಸ್ ಪ್ರಕಟಣೆಯ ಪ್ರಕಾರ, ಶಬ್ಧದ ಗರಿಷ್ಟ ಮಟ್ಟ ೬೨.೭ ಡೆಸಿಬೆಲ್ ಇರಬೇಕು. ಆದರೆ ಬೆಂಗಳೂರಿನ ರಸ್ತೆಗಳಲ್ಲಿ ಶಬ್ಧದ ತೀವ್ರತೆ ೧೦೦ ಡೆಸಿಬೆಲ್ ಗಿಂತ ಹೆಚ್ಚಿದೆ. ದಿನನಿತ್ಯ ಶಾಲಾಕಾಲೇಜು, ಆಫೀಸು ಅಥವಾ ಇತರೆ ಕೆಲಸಗಳಿಗೆ ಪ್ರಯಾಣ ಮಾಡುವವರಿಗೆ ಇದು ಗಂಭೀರವಾದ ಸಮಸ್ಯೆ. ಬೇರೆ ಊರುಗಳಲ್ಲಿ ಸಿಗುವ ಪ್ರಶಾಂತವಾದ ವಾತಾವರಣ ಬೆಂಗಳೂರಿನಲ್ಲಿ ಸಿಗಲು ಸದ್ಯವೇ? ಇದಕ್ಕೆಲ್ಲ ಉತ್ತರ ಎಂದರೆ ಸಂಚಾರ ದಟ್ಟನೆ ನಿಯಂತ್ರಣ. ಸರಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆಯಾದರು ಅದು ಸಾಕಾಗುತ್ತಿಲ್ಲ. ಸಾಮಾನ್ಯ ಪ್ರಜೆಗಳಾಗಿ ನಾವು ಕೈಗೆತ್ತಿಕೊಳ್ಳಬಹುದಾದ ಅಂಶಗಳು ಹೇಗಿವೆ..


೧. ಅನಾವಶ್ಯಕವಾಗಿ ಹಾರ್ನ್ ಮಾಡುವುದನ್ನು ನಿಲ್ಲಿಸಬೇಕು : ಹೌದು. ನಮ್ಮ ದೇಶದಲ್ಲಿ ವಾಹನ ಚಾಲಕರು ಒಂದೇ ಸಮನೆ ಹಾರ್ನ್ ಮಾಡುವುದು ಹವ್ಯಾಸವಾಗಿದೆ. ಬಹಳಷ್ಟು ಸನ್ನಿವೇಶದಲ್ಲಿ ಹಾರ್ನ್ ನ ಅವಶ್ಯಕತೆ ಇರುವುದಿಲ್ಲ. ಆದರೂ ಧೀರ್ಗವಾಗಿ ಹಾರ್ನ್ ಮಾಡುವುದು ರೂಡಿ. ಬೆಂಗಳೂರಿನ ವಾಹನ ದಟ್ಟಣೆ ಹೆಚ್ಚಿರುವ ಯಾವುದೇ ರಸ್ತೆಯ ಮೇಲೆ ನಿಂತರೂ, ನಮಗೆ ಕೇಳುವುದು ಬರಿ ಹಾರ್ನ್ ಗಳ ಶಬ್ಧವೇ. ಆದ್ದರಿಂದ, ಹಾರ್ನ್ ಮಾಡುವುದೇ ರಸ್ತೆಯಲ್ಲಿ ಶಬ್ದ ಮಾಲಿನ್ಯಕ್ಕೆ ಪ್ರಮುಖವಾದ ಕರಣ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರಾಹುಲ್ ದ್ರಾವಿಡ್ ಅವರು “I won’t honk” (ನಾನು ಹಾರ್ನ್ ಮಾಡುವುದಿಲ್ಲ ) ಯಂಬ ಘೋಷಣೆಯನ್ನು ಸಾರುವುದರ ಮೂಲಕ ಜನರಲ್ಲಿ ಹಾರ್ನ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ರಸ್ತೆ ಸಾರಿಗೆ ಸಂಸ್ತೆಯು ಹಾರ್ನ್ ಬಳಕೆಯ ಬಗ್ಗೆ ನಿಯಮಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಚಾಲಕರು ಇದರ ಪ್ರಾಮುಖ್ಯತೆಯನ್ನರಿತು ಅನಗತ್ಯವಾದ ಹಾರ್ನ್ ಬಳಕೆಯನ್ನು ನಿಲ್ಲಿಸಬೇಕು .


೨. ರಸ್ತೆಯಲ್ಲಿ ಶಿಸ್ತು ಹಾಗು ನಿಯಮವನ್ನು ಪಾಲಿಸದೆ ಇರುವುದು: ಶಿಸ್ತು ಜೀವನದ ಬಹು ಮುಖ್ಯವಾದ ಅಂಶ . ಅದು ರಸ್ತೆಯ ಮೇಲೆ ವಾಹನ ಚಲಾಯಿಸುವಾಗಲು ಅನ್ವಯವಾಗುತ್ತದೆ . ನಾನೇ ಎಲ್ಲರಿಗಿಂತ ಮುಂದೆ ಇರಬೇಕು, ವೇಗವಾಗಿ ಚಲಿಸಬೇಕು ಯಂದು ನುಗ್ಗಲು ಪ್ರಯತ್ನಿಸುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಇತರ ಚಾಲಕರಿಗೆ ಆಗುವ ತೊಂದರೆಗಳಮೇಲೆ ನಿಗವಿರಬೀಕು. ರಸ್ತೆಯಲ್ಲಿ ನಿಯಮದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಇದೆಯೋ ಅವರಿಗೆ ಮೊದಲು ಮುಂದೆ ಹೋಗಲು ಬಿಡಬೇಕು. ಬೇರೆಯವರಿಗೆ ತೊಂದರೆ ಕೊಡದೆ ಅನ್ಯರ ಹಕ್ಕುಗಳ ಬಗ್ಗೆ ಗೌರವ ಬೆಳೆಸಿಕೊಳ್ಳುವುದು ಅತ್ಯಾವಶ್ಯಕ. ಹೀಗೆ ಮಾಡುವುದರಿಂದ ಹಾಗು ಒಬ್ಬರ ಹಿಂದೆ ಒಬ್ಬರು ಸಾಲಾಗಿ ಚಲಿಸುವುದರಿಂದ ಸಂಚಾರ ದಟ್ಟಣೆ ಯಾಗದೆ ಎಲ್ಲರೂ ಸರಾಗವಾಗಿ ಚಲಿಸಲು ಅವಕಾಶ ಸಿಗುತ್ತದೆ. ಇದರಿಂದ ಶಬ್ದ ಮಾಲಿನ್ಯವೂ ಕಡಿಮೆಯಾಗುತ್ತದೆ.


೩. ಕಾರ್ ಪೂಲ್ (carpooling) ಮಾಡುವುದು: ಕಾರ್ಪೂಲಿಂಗ್ ಮಾಡುವುದರಿಂದ ರಸ್ತೆಯ ಮೇಲೆ ಕಾರುಗಳ ಸಂಖ್ಯೆ ಕಡಿಮೆಯಾಗಿ ಸಂಚಾರ ದಟ್ಟನೆ ಕಡಿಮೆಯಾಗುವುದು. ಇದರಿಂದ ಶಬ್ಧಮಾಲಿನ್ಯ ಕೂಡ ಕಡಿಮೆಯಾಗುವುದು.


೪. ಸಾರ್ವಜನಿಕ ಸಂಚಾರ ವ್ಯವಸ್ಥೆ ಬಳಸುವುದು: ನಮ್ಮ ಸ್ವಂತ ವಾಹನಗಳನ್ನು ಬಳಸದೆ ಸಾರ್ವಜನಿಕ ವಾಹನಗಳನ್ನು, ಅಂದರೆ ಬಸ್ಸು, ರೈಲು, ಮೆಟ್ರೋ, ಇತ್ಯಾದಿ ಗಳನ್ನೂ ಬಳಸುವುದರಿಂದ ರಸ್ತೆಯ ಮೇಲಿನ ವಾಹನಗಳ ಒತ್ತಡ ಕಡಿಮೆಯಾಗುತ್ತದೆ. ಇದರಿಂದ  ಶಬ್ಧಮಾಲಿನ್ಯ ಕೂಡ ಕಡಿಮೆಯಾಗುತ್ತದೆ.


- ಆದರ್ಶ್ ಬಿ ಎಂ

No comments:

Post a Comment